"ಉರಿಲಿಂಗದೇವ":- 
ಸು.1170, ಬಸವಾದಿ ಮಹಾಶರಣರಲ್ಲಿ ಒಬ್ಬ ಶರಣಸತಿ, ಲಿಂಗಪತಿ ಹೊಂದಿದ್ದ ನೈಷ್ಟಿಕ ಬ್ರಹ್ಮಚಾರಿ, ಆಚಾರ್ಯಪುರುಷ. ಕಾಶ್ಮೀರದಿಂದ ಬಂದು ಕಲ್ಯಾಣದಲ್ಲಿ ನೆಲೆಸಿದ ಮಹಾಪಂಡಿತ ಶಿವಲೆಂಕಮುಂಚಣ್ಣನ ಮಗನೆಂದು ನೀಲಕಂಠಾಚಾರ್ಯನ (ಸು. 1485) ಆರಾಧ್ಯಚರಿತ್ರದಲ್ಲಿ ಹೇಳಿದ. ಈತ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿರುವ ಕಂದಹಾರ್ (ಕಂಧಾರ್, ಕಂದಾಪುರ) ಪಟ್ಟಣದಲ್ಲಿ ಮಠಾಧಿಪತಿಯಾಗಿದ್ದ. ಮಹಾಕ್ರಾಂತಿಕಾರ. ಗೋದಾವರೀ ತೀರಪ್ರದೇಶದಲ್ಲಿ ವೀರಶೈವ ಜಾಗೃತಿಯ ಗುರುತರ ಹೊಣೆ ಹೊತ್ತು ಅನೇಕರಿಗೆ ವೀರಶೈವೋಪದೇಶ ಮಾಡಿದ. ಕಲ್ಯಾಣದಲ್ಲಿ ಬಸವಾದಿ ಪ್ರಮಥರು ಹರಳಯ್ಯ ಮತ್ತು ಮಧುವರಸರಿಗೆ ಲಿಂಗದೀಕ್ಷೆಯಿತ್ತು ಶರೀರಸಂಬಂಧ ಮಾಡಿಸಿದರೆ ಪೆದ್ದಣ್ಣ (ನೋಡಿ- ಉರಿಲಿಂಗ-ಪೆದ್ದಿ) ಮತ್ತು ಕಾಳವ್ವೆಯರೆಂಬ ಅಸ್ಪøಶ್ಯರಿಗೆ ಉರಿಲಿಂಗದೇವ ವೀರಶೈವೋಪದೇಶವಿತ್ತು ಶಿವಾನುಭವ ಶಾಸ್ತ್ರಕೋವಿದರನ್ನಾಗಿಸಿದ. ಅಷ್ಟೇ ಅಲ್ಲದೆ ಪೆದ್ದಣ್ಣನಿಗೆ ಮಠಾಧ್ಯಕ್ಷ ಪದವಿಯನ್ನೂ ದಯಪಾಲಿಸಿದ. ವಿರೋಧಿಗಳು ಈತ ವಾಸಿಸುತ್ತಿದ್ದ ಚಪ್ಪರಕ್ಕೆ ಬೆಂಕಿ ಹಾಕಿ ಸುಟ್ಟರು. ಆದರೂ ಈತ ಧೃತಿಗೆಡಲಿಲ್ಲ. ತನ್ನ ಶಿಷ್ಯಕೋಟಿ ಸಮೇತನಾಗಿ ಈತ ಆಗಾಗ ಕಲ್ಯಾಣಪಟ್ಟಣಕ್ಕೆ ಹೋಗಿ ಬರುತ್ತಿದ್ದನೆಂದು ಹಲವು ಗ್ರಂಥಗಳಿಂದ ತಿಳಿಯುತ್ತದೆ. ಈತ ರಚಿಸಿದ 29 ವಚನಗಳು ಉಪಲಬ್ಧವಿವೆಯೆಂದೂ ವಚನಗಳ ಕೊನೆಯಲ್ಲಿ ಉರಿಲಿಂಗದೇವ ಎಂಬ ಮುದ್ರಿಕೆ ಇದೆಯೆಂದೂ ಕವಿಚರಿತಕಾರರು ತಿಳಿಸುತ್ತಾರೆ.
(ಜೆ.ಎಸ್.ಪಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ